ಕೃಷ್ಣ, ಎಂ ಎಚ್
1892-1947. ಕರ್ನಾಟಕದ ಖ್ಯಾತ ಪುರಾತತ್ವಜ್ಞ. ಜನನ 1892ರ ಆಗಸ್ಟ್ 19. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದು 1928ರ ಜೂನ್ 10ರಂದು ಪುರಾತತ್ತ್ವ ಇಲಾಖೆಯ ಮುಖ್ಯಸ್ಥರಾದರು. ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಲೇ ಇಂಗ್ಲೆಂಡಿಗೆ ಹೋಗಿ ನಾಣ್ಯಶಾಸ್ತ್ರವನ್ನು ಅಧ್ಯಯನ ಮಾಡಿ ಪ್ರಾಚೀನ ದಖನಿನ ನಾಣ್ಯಗಳ ಮೇಲೆ ಉತ್ತಮವಾದ ಪ್ರಬಂಧ ರಚಿಸಿದರು. ಡಾಕ್ಟೊರಲ್ ಪದವಿ ಗಳಿಸಿದರು. ಪುರಾತತ್ವ ಕ್ಷೇತ್ರದಲ್ಲಿ ಅನೇಕ ಮಹತ್ತ್ವಪೂರ್ಣ ಸಂಶೋಧನೆಗಳನ್ನು ಮಾಡಿದರು. ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಇವರು ನಡೆಸಿದ ಭೂಶೋಧನೆ ಪ್ರಸಿದ್ಧವಾದ್ದು. ಚಂದ್ರವಳ್ಳಿ ಸಾತವಾಹನರ ಕಾಲದ ಪಟ್ಟಣವಾಗಿತ್ತೆಂದೂ ಅದು ಆಗಸ್ಟಸ್ ಮತ್ತು ಟೈಬೀರಿಯಸ್ (ಕ್ರಿ.ಶ. 1ನೆಯ ಶತಮಾನ) ಕಾಲದ ರೋಮನ್ ಚಕ್ರಾಧಿಪತ್ಯದೊಡನೆ ವ್ಯಾಪಾರ ಸಂಬಂಧ ಹೊಂದಿತ್ತೆಂದೂ ಸ್ಥಿರಪಡಿಸಿದರು. ಅಶೋಕನ ಕಾಲದ ಪಟ್ಟಣವಾದ ಇಸಿಲ (ಈಗಿನ ಬ್ರಹ್ಮಗಿರಿ) ಬಳಿ ಇವರು ನಡೆಸಿದ ಭೂಶೋಧನೆಯಿಂದ ಅಲ್ಲಿ ಅಶೋಕನ ಕಾಲಕ್ಕಿಂತ ಹಳೆಯದಾದ ನವಶಿಲಾಯುಗದ ಸಂಸ್ಕøತಿಯಿದ್ದುದು ಪತ್ತೆಯಾಯಿತು (1939-40). ಇವರು ಪ್ರಕಟಿಸಿದ ಪುರಾತತ್ವ ಇಲಾಖೆ ವರದಿಗಳೂ (1929-1945) ಮೈಸೂರು ಮತ್ತು ಹಾಸನಗಳ ಶಾಸನ ಗ್ರಂಥಗಳೂ ವಿದ್ವತ್ಪೂರ್ಣವಾಗಿಯೂ ಅತ್ಯಂತ ಉಪಯುಕ್ತವೂ ಅದಂಥವು. 1947 ಡಿಸೆಂಬರ್ 23 ರಂದು ಎಂ.ಎಚ್. ಕೃಷ್ಣ ನಿಧನ ಹೊಂದಿದರು. 						
(ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ